ಆ ದಿನಗಳಲ್ಲಿ ಅರಸನಾದ ಹೆರೋದನು ದೇವರ ಸಭೆಯ ಸದಸ್ಯರನ್ನು ಹಿಂಸಿಸುವ ಉದ್ದೇಶದಿಂದ ಕೆಲವರನ್ನು ಬಂಧಿಸಿದನು.
KO
Copywork
Kannada OKCV 사도행전 12장
성경필사는 빠르게 끝내는 입력 훈련이 아니라, 한 절씩 말씀의 문장과 흐름을 다시 붙드는 시간입니다. 입력 내용은 이 브라우저에 임시 저장되며, 로그인하면 계정에도 저장됩니다.
소제목 단위로 진행 · 사도행전
ಯೋಹಾನನ ಸಹೋದರ ಯಾಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.
ಇದರಿಂದ ಯೆಹೂದ್ಯರಿಗೆ ಮೆಚ್ಚಿಕೆಯಾಯಿತೆಂದು ತಿಳಿದಾಗ, ಅವನು ಪೇತ್ರನನ್ನು ಬಂಧಿಸಿದನು. ಇದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಸಮಯದಲ್ಲಿ ನಡೆಯಿತು.
ಪೇತ್ರನನ್ನು ಬಂಧಿಸಿದ ನಂತರ ಅವನನ್ನು ಸೆರೆಮನೆಯಲ್ಲಿ ಹಾಕಿದನು. ಪೇತ್ರನನ್ನು ಕಾಯಲು ನಾಲ್ಕು ದಳಗಳನ್ನು ನೇಮಿಸಿದನು. ಒಂದೊಂದು ದಳದಲ್ಲಿಯೂ ನಾಲ್ಕು ಸಿಪಾಯಿಗಳಿದ್ದರು. ಪಸ್ಕಹಬ್ಬ ಮುಗಿದ ತರುವಾಯ ಪೇತ್ರನನ್ನು ಬಹಿರಂಗ ವಿಚಾರಣೆಗೆ ತರಬೇಕೆಂದು ಉದ್ದೇಶಿಸಿದ್ದನು.
ಹೀಗೆ ಪೇತ್ರನು ಸೆರೆಮನೆಯಲ್ಲಿ ಬಂಧಿಸಲಾಗಿದ್ದಾಗ, ದೇವರ ಸಭೆಯು ಅವನಿಗೋಸ್ಕರವಾಗಿ ಆಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಿತ್ತು.
ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು.
ಫಕ್ಕನೆ ದೇವದೂತನೊಬ್ಬನು ಪ್ರತ್ಯಕ್ಷನಾಗಲು ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಅವನು ಪೇತ್ರನನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದನು. ಪೇತ್ರನ ಕೈಗಳಿಗೆ ಬಂಧಿಸಿದ್ದ ಸರಪಣಿಗಳು ಕಳಚಿಬಿದ್ದವು.
“ನಿನ್ನ ಬಟ್ಟೆಗಳನ್ನೂ ಮೆಟ್ಟುಗಳನ್ನೂ ಧರಿಸಿಕೋ,” ಎಂದು ದೇವದೂತನು ಅವನಿಗೆ ಹೇಳಲು, ಪೇತ್ರನು ಅದರಂತೆ ಮಾಡಿದನು. “ನಿನ್ನ ನಿಲುವಂಗಿಯನ್ನು ಸುತ್ತಿಕೊಂಡು ನನ್ನನ್ನು ಹಿಂಬಾಲಿಸು,” ಎಂದು ದೇವದೂತನು ಹೇಳಿದನು.
ಪೇತ್ರನು ಸೆರೆಮನೆಯಿಂದ ಹೊರಗೆ ಅವನನ್ನು ಹಿಂಬಾಲಿಸಿ ಹೊರಟನು. ದೇವದೂತನು ಮಾಡುತ್ತಿರುವುದು ನಿಜವಾಗಿಯೂ ನಡೆಯುತ್ತಿದೆ ಎಂಬುದು ಅವನಿಗೆ ತಿಳಿಯಲಿಲ್ಲ. ತಾನು ದರ್ಶನ ಕಾಣುತ್ತಿರುವೆನೋ ಎಂದು ಭಾವಿಸಿದನು.
ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣದೊಳಗೆ ನಡೆಸುವ ಕಬ್ಬಿಣದ ದ್ವಾರಕ್ಕೆ ಅವರು ಬಂದರು. ಅದು ತನ್ನಷ್ಟಕ್ಕೆ ತಾನೇ ತೆರೆಯಲು ಅವರು ಅದನ್ನು ದಾಟಿ ಹೊರಗೆ ಬಂದರು. ಒಂದು ಬೀದಿಯನ್ನು ದಾಟುವವರೆಗೆ ನಡೆದು ಬಂದ ನಂತರ ಫಕ್ಕನೆ ದೇವದೂತನು ಪೇತ್ರನನ್ನು ಬಿಟ್ಟುಹೋದನು.
ಆಗ ಪೇತ್ರನು ಸಂಪೂರ್ಣವಾಗಿ ಎಚ್ಚರಗೊಂಡು, “ಈಗ ಕರ್ತದೇವರು ತಮ್ಮ ದೂತನನ್ನು ಕಳುಹಿಸಿ ಹೆರೋದನ ಹಿಡಿತದಿಂದಲೂ ಯೆಹೂದ್ಯ ಜನರು ನಿರೀಕ್ಷಿಸುತ್ತಿದ್ದ ಎಲ್ಲಾ ಕೇಡಿನಿಂದಲೂ ನನ್ನನ್ನು ಉಳಿಸಿ ಕಾಪಾಡಿರುವರು ಎಂದು ಈಗ ನನಗೆ ಗೊತ್ತಾಗಿದೆ,” ಎಂದುಕೊಂಡನು.
ಅವನು ಇದನ್ನು ಗ್ರಹಿಸಿ, ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಒಟ್ಟಾಗಿ ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.
ಪೇತ್ರನು ಬಾಗಿಲನ್ನು ತಟ್ಟಿದಾಗ, ರೋದೆ ಎಂಬ ಸೇವಕಿ ಬಾಗಿಲು ತೆರೆಯಲು ಬಾಗಿಲ ಬಳಿಗೆ ಬಂದಳು.
ಪೇತ್ರನ ಧ್ವನಿಯನ್ನು ಗುರುತಿಸಿ ಸಂತೋಷದಿಂದ ಕೂಡಿದವಳಾಗಿ ಬಾಗಿಲು ತೆರೆಯದೆ ಹಿಂದೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿಯಲ್ಲಿದ್ದಾನೆ!” ಎಂದು ತಿಳಿಸಿದಳು.
ಆದರೆ ಅವರು, “ನಿನಗೆ ಹುಚ್ಚುಹಿಡಿದಿದೆ,” ಎಂದರು. ತಾನು ಹೇಳುವುದು ನಿಜ ಎಂದು ಆಕೆ ಒತ್ತಿ ಹೇಳುತ್ತಿರಲು ಅವರು, “ಅದು ಅವನ ದೂತನೇ ಆಗಿರಬೇಕು,” ಎಂದರು.
ಆದರೆ ಪೇತ್ರನು ಬಾಗಿಲು ತಟ್ಟುತ್ತಲೇ ಇರಲು, ಅವರು ಹೋಗಿ ಬಾಗಿಲು ತೆರೆಯಲು ಅವನನ್ನು ಕಂಡು ಅತ್ಯಾಶ್ಚರ್ಯಗೊಂಡರು.
ಸುಮ್ಮನಿರಬೇಕೆಂದು ಪೇತ್ರನು ಅವರಿಗೆ ಕೈಸನ್ನೆ ಮಾಡಿ ಕರ್ತದೇವರು ಹೇಗೆ ತನ್ನನ್ನು ಸೆರೆಮನೆಯಿಂದ ಬಿಡಿಸಿ ಹೊರಗೆ ಕರೆದುಕೊಂಡು ಬಂದರು ಎಂಬುದನ್ನು ವಿವರಿಸಿದನು. “ಇದನ್ನು ಯಾಕೋಬನಿಗೆ ಹಾಗೂ ಸಹೋದರರಿಗೆ ತಿಳಿಸಿರಿ,” ಎಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.
ಬೆಳಗಾದ ಮೇಲೆ ಪೇತ್ರನಿಗೆ ಏನಾಯಿತೆಂದು ಸೈನಿಕರ ನಡುವೆ ಬಹಳಷ್ಟು ಗೊಂದಲವಿತ್ತು.
ಹೆರೋದನು ಅವನನ್ನು ಹುಡುಕಿ ಕಾಣದೆ ಹೋದದ್ದರಿಂದ ಕಾವಲುಗಾರರನ್ನು ವಿಚಾರಿಸಿ, ಅವರಿಗೆ ಮರಣದಂಡನೆಯನ್ನು ವಿಧಿಸಿದನು.
ಅವನು ಟೈರ್ ಮತ್ತು ಸೀದೋನಿನ ಜನರೊಂದಿಗೆ ಬಹು ಕೋಪವುಳ್ಳವನಾಗಿದ್ದನು. ಈಗ ಅವರೆಲ್ಲರೂ ಒಂದಾಗಿ ಅವನ ಬಳಿ ಬಂದು ಅರಸನ ನಂಬಿಗಸ್ತ ಸೇವಕನಾದ ಬ್ಲಾಸ್ತ ಎಂಬುವನ ಬೆಂಬಲವನ್ನು ಪಡೆದುಕೊಂಡು, ಸಂಧಾನ ಮಾಡಿಕೊಳ್ಳಲು ಅರಸನನ್ನು ಕೇಳಿಕೊಂಡರು. ಏಕೆಂದರೆ ಅವರ ಆಹಾರ ಧಾನ್ಯಗಳು ಅರಸನ ಸೀಮೆಯಿಂದ ಬರುತ್ತಿದ್ದವು.
ನೇಮಕವಾದ ದಿನ ಹೆರೋದನು ತನ್ನ ರಾಜವಸ್ತ್ರಗಳನ್ನು ಧರಿಸಿಕೊಂಡು ಸಿಂಹಾಸನದ ಮೇಲೆ ಕುಳಿತುಕೊಂಡು ಜನರನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಿದನು.
“ಇದು ಮಾನವ ಧ್ವನಿಯಲ್ಲ ದೇವರದೇ!” ಎಂದು ಜನರು ಆರ್ಭಟಿಸಿದರು.
ಹೆರೋದನು ದೇವರಿಗೆ ಸಲ್ಲಿಸಬೇಕಾದ ಮಹಿಮೆ ಸಲ್ಲಿಸದೇ ಹೋದದ್ದರಿಂದ ಕೂಡಲೇ ಒಬ್ಬ ದೇವದೂತನು ಅವನನ್ನು ಹೊಡೆಯಲು ಅವನು ಹುಳ ಬಿದ್ದು ಸತ್ತುಹೋದನು.
ದೇವರ ವಾಕ್ಯವಾದರೋ ವೃದ್ಧಿಯಾಗುತ್ತಾ ಪ್ರಸಾರಗೊಂಡಿತು.
ಬಾರ್ನಬ ಮತ್ತು ಸೌಲನು ತಮ್ಮ ಸೇವಾಕಾರ್ಯವನ್ನು ಮುಗಿಸಿ, ಮಾರ್ಕ ಎಂದು ಕರೆಯಲಾಗುತ್ತಿದ್ದ ಯೋಹಾನನನ್ನು ತಮ್ಮೊಂದಿಗೆ ಕರೆದುಕೊಂಡು ಯೆರೂಸಲೇಮಿನಿಂದ ಹೊರಟು ಹೋದರು.