ಈ ಸಮಯದಲ್ಲಿ ಲೇವಿಯ ವಂಶದವನಾದ ಒಬ್ಬನು ಲೇವಿಯ ಸ್ತ್ರೀಯನ್ನು ಮದುವೆಯಾದನು.
KO
Copywork
Kannada OKCV 출애굽기 2장
성경필사는 빠르게 끝내는 입력 훈련이 아니라, 한 절씩 말씀의 문장과 흐름을 다시 붙드는 시간입니다. 입력 내용은 이 브라우저에 임시 저장되며, 로그인하면 계정에도 저장됩니다.
소제목 단위로 진행 · 출애굽기
ಆ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತಳು. ಅದು ಸುಂದರವಾಗಿದ್ದುದರಿಂದ ಮೂರು ತಿಂಗಳು ಬಚ್ಚಿಟ್ಟರು.
ಆದರೆ ಅದನ್ನು ಹೆಚ್ಚುಕಾಲ ಬಚ್ಚಿಡುವುದಕ್ಕಾಗದೆ ಇದ್ದಾಗ, ಅವನಿಗಾಗಿ ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು, ಜೇಡಿಮಣ್ಣನ್ನು ಮತ್ತು ರಾಳವನ್ನು ಹಚ್ಚಿ, ಕೂಸನ್ನು ಅದರಲ್ಲಿಟ್ಟು, ನೈಲ್ ನದಿಯ ಅಂಚಿನಲ್ಲಿ ಇದ್ದ ಜಂಬು ಹುಲ್ಲಿನಲ್ಲಿ ಇಟ್ಟರು.
ಕೂಸಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕೆ ದೂರದಲ್ಲಿ ಅದರ ಅಕ್ಕ ನಿಂತುಕೊಂಡಳು.
ಆಗ ಫರೋಹನ ಮಗಳು ನೈಲ್ ನದಿಯಲ್ಲಿ ಸ್ನಾನ ಮಾಡುವದಕ್ಕೆ ಬಂದಳು. ಆಕೆಯ ದಾಸಿಯರು ನದಿಯ ಅಂಚಿನಲ್ಲಿ ತಿರುಗಾಡುತ್ತಿದ್ದರು. ಫರೋಹನ ಮಗಳು ಜಂಬು ಹುಲ್ಲಿನಲ್ಲಿದ್ದ ಪೆಟ್ಟಿಗೆಯನ್ನು ನೋಡಿ ತನ್ನ ದಾಸಿಯನ್ನು ಕಳುಹಿಸಿ, ಅದನ್ನು ತರಿಸಿದಳು.
ಆ ಪೆಟ್ಟಿಗೆಯನ್ನು ತೆರೆದಾಗ, ಕೂಸನ್ನು ನೋಡಿದಳು. ಕೂಸು ಅಳುತ್ತಿತ್ತು. ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು. ಅವಳು, “ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು,” ಎಂದು ಹೇಳಿದಳು.
ಆಗ ಮಗುವಿನ ಅಕ್ಕ ಫರೋಹನ ಮಗಳಿಗೆ, “ನಾನು ಹೋಗಿ ಈ ಕೂಸಿಗೆ ಹಾಲು ಕೊಟ್ಟು ಸಾಕುವುದಕ್ಕೆ ಹಿಬ್ರಿಯ ಸ್ತ್ರೀಯರಿಂದ ಒಬ್ಬ ದಾದಿಯನ್ನು ನಿನಗೋಸ್ಕರ ಕರೆದುಕೊಂಡು ಬರಲೋ?” ಎಂದಳು.
ಫರೋಹನ ಮಗಳು ಆಕೆಗೆ, “ಹೌದು, ಹೋಗು,” ಎಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನೇ ಕರೆದುಕೊಂಡು ಬಂದಳು.
ಫರೋಹನ ಮಗಳು ಆಕೆಗೆ, “ಈ ಮಗುವನ್ನು ತೆಗೆದುಕೊಂಡುಹೋಗಿ, ನನಗೋಸ್ಕರ ಸಾಕು. ನಾನು ನಿನಗೆ ಸಂಬಳವನ್ನು ಕೊಡುವೆನು,” ಎಂದಳು. ಆಗ ಆ ಸ್ತ್ರೀಯು ಕೂಸನ್ನು ತೆಗೆದುಕೊಂಡುಹೋಗಿ ಸಾಕಿದಳು.
ಆ ಮಗುವು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಹೋದಳು. ಅವನು ಆಕೆಗೆ ಮಗನಾದನು. ಆಕೆಯು, “ನೀರಿನೊಳಗಿಂದ ಇವನನ್ನು ಎಳೆದೆ,” ಎಂದು ಹೇಳಿ ಅವನಿಗೆ “ಮೋಶೆ” ಎಂದು ಹೆಸರಿಟ್ಟಳು.
ಹಲವು ವರ್ಷಗಳ ನಂತರ ಮೋಶೆಯು ದೊಡ್ಡವನಾದ ಮೇಲೆ ತನ್ನ ಸಹೋದರರ ಬಳಿಗೆ ಹೋಗಿ ಅವರ ಬಿಟ್ಟೀ ಕೆಲಸಗಳನ್ನು ನೋಡಿದಾಗ, ಒಬ್ಬ ಈಜಿಪ್ಟಿನವನು ತನ್ನ ಸಹೋದರರಲ್ಲಿ ಒಬ್ಬ ಹಿಬ್ರಿಯನನ್ನು ಹೊಡೆಯುವುದನ್ನು ನೋಡಿದನು.
ಅವನು ಸುತ್ತಮುತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು ಆ ಈಜಿಪ್ಟಿನವನನ್ನು ಕೊಂದುಹಾಕಿ, ಮರಳಿನಲ್ಲಿ ಮುಚ್ಚಿಹಾಕಿದನು.
ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಹಿಬ್ರಿಯರಾದ ಇಬ್ಬರು ಮನುಷ್ಯರು ಜಗಳವಾಡುತ್ತಿದ್ದರು. ತಪ್ಪು ಮಾಡಿದವನಿಗೆ ಮೋಶೆ, “ಏಕೆ ನಿನ್ನ ಜೊತೆಯವನನ್ನು ಹೊಡೆಯುತ್ತೀ?” ಎಂದನು.
ಅದಕ್ಕವನು, “ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿದ್ದಾರೆ? ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದು ಹಾಕಬೇಕೆಂದಿದ್ದೀಯೋ?” ಎಂದನು. ಆಗ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ತಿಳಿದಿರಬೇಕು,” ಎಂದುಕೊಂಡನು.
ಫರೋಹನು ಈ ವಿಷಯವನ್ನು ಕೇಳಿದಾಗ, ಮೋಶೆಯನ್ನು ಕೊಂದುಹಾಕುವುದಕ್ಕೆ ಪ್ರಯತ್ನಿಸಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್ ದೇಶಕ್ಕೆ ವಾಸಿಸಲು ಹೋದನು. ಅಲ್ಲಿ ಒಂದು ಬಾವಿಯ ಬಳಿಯಲ್ಲಿ ಕೂತುಕೊಂಡನು.
ಮಿದ್ಯಾನಿನ ಯಾಜಕನಿಗೆ ಏಳುಮಂದಿ ಪುತ್ರಿಯರಿದ್ದರು. ಇವರು ಬಂದು ತಮ್ಮ ತಂದೆಯ ಕುರಿಮಂದೆಗಳಿಗೆ ನೀರು ಕುಡಿಸುವದಕ್ಕಾಗಿ ನೀರು ಸೇದಿ, ದೋಣಿಗಳನ್ನು ತುಂಬಿಸುತ್ತಿದ್ದರು.
ಕುರುಬರು ಬಂದು ಅವರನ್ನು ಅಲ್ಲಿಂದ ಓಡಿಸಲು, ಮೋಶೆಯು ಎದ್ದು ಬಂದು ಅವರಿಗೆ ಸಹಾಯಮಾಡಿ, ಅವರ ಕುರಿಗಳಿಗೆ ನೀರು ಕುಡಿಸಿದನು.
ಹುಡುಗಿಯರು ತಮ್ಮ ತಂದೆ ರೆಯೂವೇಲನ ಬಳಿಗೆ ಬಂದಾಗ, ಅವನು ಅವರಿಗೆ, “ಏಕೆ ಈ ಹೊತ್ತು ಬೇಗ ಬಂದಿರಿ?” ಎಂದನು.
ಅದಕ್ಕೆ ಅವರು, “ಈಜಿಪ್ಟಿನವನಾದ ಒಬ್ಬ ಮನುಷ್ಯನು ಕುರುಬರ ಕೈಯಿಂದ ನಮ್ಮನ್ನು ತಪ್ಪಿಸಿ, ನಮಗೋಸ್ಕರ ಸಾಕಾಗುವಷ್ಟು ನೀರು ಸೇದಿ, ಮಂದೆಗೆ ಕುಡಿಸಿದನು,” ಎಂದರು.
ಆಗ ರೆಯೂವೇಲನು ತನ್ನ ಪುತ್ರಿಯರಿಗೆ, “ಅವನು ಎಲ್ಲಿದ್ದಾನೆ? ಏಕೆ ಆ ಮನುಷ್ಯನನ್ನು ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ಊಟಮಾಡಲಿ,” ಎಂದನು.
ಮೋಶೆಯು ಆ ಮನುಷ್ಯನ ಸಂಗಡ ವಾಸಮಾಡುವುದಕ್ಕೆ ಸಮ್ಮತಿಸಿದನು. ಅವನು ಮೋಶೆಗೆ ತನ್ನ ಮಗಳಾದ ಚಿಪ್ಪೋರಳನ್ನು ಮದುವೆ ಮಾಡಿಕೊಟ್ಟನು.
ಆಕೆಯು ಅವನಿಗೆ ಮಗನನ್ನು ಹೆತ್ತಾಗ, ಮೋಶೆಯು ಅವನಿಗೆ ಗೇರ್ಷೋಮ್ ಎಂದು ಹೆಸರಿಟ್ಟನು ಏಕೆಂದರೆ ಅವನು, “ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ,” ಎಂದನು.
ಹೀಗೆ ಬಹಳ ದಿನಗಳಾದ ಮೇಲೆ ಈಜಿಪ್ಟಿನ ಅರಸನು ಸತ್ತನು. ಇಸ್ರಾಯೇಲರು ದಾಸತ್ವದ ಕಾರಣದಿಂದ ನರಳಾಡುತ್ತಾ ಮೊರೆಯಿಡುತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಮುಟ್ಟಿತು.
ದೇವರು ಅವರ ನರಳಾಟವನ್ನು ಕೇಳಿದಾಗ, ಅವರು ಅಬ್ರಹಾಮ, ಇಸಾಕ ಮತ್ತು ಯಾಕೋಬನ ಸಂಗಡ ತಾವು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡರು.
ದೇವರು ಇಸ್ರಾಯೇಲರನ್ನು ನೋಡಿ ಅವರಲ್ಲಿ ಕನಿಕರಗೊಂಡರು.