ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ಎಲ್ಲಾ ದೆವ್ವಗಳನ್ನು ಓಡಿಸುವುದಕ್ಕೂ ರೋಗಗಳನ್ನು ಸ್ವಸ್ಥಮಾಡುವುದಕ್ಕೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು,
KO
Copywork
Kannada OKCV 누가복음 9장
성경필사는 빠르게 끝내는 입력 훈련이 아니라, 한 절씩 말씀의 문장과 흐름을 다시 붙드는 시간입니다. 입력 내용은 이 브라우저에 임시 저장되며, 로그인하면 계정에도 저장됩니다.
소제목 단위로 진행 · 누가복음
ಶಿಷ್ಯರು ದೇವರ ರಾಜ್ಯವನ್ನು ಸಾರುವುದಕ್ಕೂ ರೋಗಿಗಳನ್ನು ಸ್ವಸ್ಥಮಾಡುವುದಕ್ಕೂ ಯೇಸು ಅವರನ್ನು ಕಳುಹಿಸಿಕೊಟ್ಟರು.
ಯೇಸು ಅವರಿಗೆ, “ನೀವು ಪ್ರಯಾಣಕ್ಕಾಗಿ ಕೋಲು, ಚೀಲ, ರೊಟ್ಟಿ ಅಥವಾ ಹಣವನ್ನು ತೆಗೆದುಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು.
ನೀವು ಯಾವುದಾದರೂ ಮನೆಯನ್ನು ಪ್ರವೇಶಿಸಿದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ.
ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ, ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ,” ಎಂದರು.
ಶಿಷ್ಯರು ಪ್ರತಿಯೊಂದು ಹಳ್ಳಿಗೆ ಹೋಗುತ್ತಾ, ಸುವಾರ್ತೆಯನ್ನು ಸಾರುತ್ತಾ, ಎಲ್ಲಾ ಕಡೆಗಳಲ್ಲಿ ರೋಗಿಗಳನ್ನು ಸ್ವಸ್ಥಮಾಡುತ್ತಾ ಹೋದರು.
ಚತುರಾಧಿಪತಿಯಾದ ಹೆರೋದನು ಯೇಸು ಮಾಡಿದವುಗಳನ್ನೆಲ್ಲಾ ಕೇಳಿ ಕಳವಳಗೊಂಡನು. ಏಕೆಂದರೆ ಯೋಹಾನನು ಸತ್ತವರೊಳಗಿಂದ ಎದ್ದಿದ್ದಾನೆಂದು ಕೆಲವರು ಹೇಳುತ್ತಿದ್ದರು.
ಕೆಲವರು ಎಲೀಯನು ಪ್ರತ್ಯಕ್ಷನಾಗಿದ್ದಾನೆಂದೂ ಇನ್ನೂ ಕೆಲವರು ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ತಿರುಗಿ ಎದ್ದಿದ್ದಾನೆಂದೂ ಹೇಳುತ್ತಿದ್ದರು.
ಆದರೆ ಹೆರೋದನು, “ನಾನು ಯೋಹಾನನನ್ನು ಶಿರಚ್ಛೇದನ ಮಾಡಿದೆ, ನಾನು ಯಾರನ್ನು ಕುರಿತು, ಈ ವಿಷಯಗಳನ್ನು ಕೇಳುತ್ತಿರುವೆ, ಈತನು ಯಾರು?” ಎಂದು ಹೇಳಿ ಅವನು ಯೇಸುವನ್ನು ಕಾಣಲು ಪ್ರಯತ್ನಿಸಿದನು.
ಅಪೊಸ್ತಲರು ಹಿಂದಿರುಗಿ ಬಂದು, ತಾವು ಮಾಡಿದವುಗಳನ್ನೆಲ್ಲಾ ಯೇಸುವಿಗೆ ತಿಳಿಸಿದರು. ಆಗ ಯೇಸು ಬೇತ್ಸಾಯಿದ ಎಂಬ ಹೆಸರಿನ ಪಟ್ಟಣಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದರು.
ಆದರೆ ಜನರು ಅದನ್ನು ತಿಳಿದು ಯೇಸುವನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವೀಕರಿಸಿ, ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥಮಾಡಿದರು.
ಸಂಜೆಯಾಗುತ್ತಿದ್ದಾಗ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಊಟವಸತಿಯನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ. ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲ,” ಎಂದರು.
ಆದರೆ ಯೇಸು ಅವರಿಗೆ, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು.
ಅಲ್ಲಿ ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಮಂದಿ ಇದ್ದರು.
ಅವರು ಹಾಗೆಯೇ ಮಾಡಿ, ಎಲ್ಲರನ್ನೂ ಕುಳ್ಳಿರಿಸಿದರು.
ತರುವಾಯ ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು.
ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿಗಳು ತುಂಬಿದವು.
ಯೇಸು ಏಕಾಂತವಾಗಿ ಪ್ರಾರ್ಥಿಸುತ್ತಿದ್ದಾಗ ಅವರ ಶಿಷ್ಯರು ಅವರೊಂದಿಗೆ ಇದ್ದರು, ಆಗ ಯೇಸು ಅವರಿಗೆ, “ಜನರು ನನ್ನನ್ನು ಯಾರೆನ್ನುತ್ತಾರೆ?” ಎಂದು ಕೇಳಿದರು.
ಅವರು ಉತ್ತರವಾಗಿ, “ಸ್ನಾನಿಕನಾದ ಯೋಹಾನನು ಎನ್ನುತ್ತಾರೆ. ಆದರೆ ಕೆಲವರು ಎಲೀಯನು. ಬೇರೆ ಕೆಲವರು ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಪುನಃ ಜೀವಂತನಾಗಿದ್ದಾನೆ ಎನ್ನುತ್ತಾರೆ,” ಎಂದು ಹೇಳಿದರು.
ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು.
ಯೇಸು ಈ ಸಂಗತಿಯನ್ನು ಯಾರಿಗೂ ಹೇಳಬಾರದೆಂದು ಅವರಿಗೆ ಖಂಡಿತವಾಗಿ ಆಜ್ಞಾಪಿಸಿದರು.
ಅನಂತರ ಯೇಸು, “ಮನುಷ್ಯಪುತ್ರನಾದ ನಾನು ಅನೇಕ ಕಷ್ಟಗಳನ್ನು ಅನುಭವಿಸಿ ಜನನಾಯಕರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ, ಕೊಲೆಗೆ ಗುರಿಯಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಏಳುವುದು ಅಗತ್ಯವಾಗಿದೆ,” ಎಂದು ಎಚ್ಚರಿಸಿದರು.
ಯೇಸು ಅವರೆಲ್ಲರಿಗೆ: “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
ಯಾರಾದರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು, ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು.
ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡು, ತನ್ನನ್ನು ತಾನೇ ಹಾಳು ಮಾಡಿಕೊಂಡರೆ, ಇಲ್ಲವೆ ನಷ್ಟಪಡಿಸಿಕೊಂಡರೆ, ಆ ವ್ಯಕ್ತಿಗೆ ಪ್ರಯೋಜನವೇನು?
ಯಾರಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವುದಾದರೆ, ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯೊಡನೆಯೂ ಪರಿಶುದ್ಧ ದೂತರೊಡನೆಯೂ ಬರುವಾಗ, ಅವರ ವಿಷಯದಲ್ಲಿ ನಾಚಿಕೊಳ್ಳುವೆನು.
“ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವನ್ನು ಕಾಣುವತನಕ ಮರಣವನ್ನು ಹೊಂದುವುದೇ ಇಲ್ಲ,” ಎಂದರು.
ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಯೇಸು, ಪೇತ್ರ, ಯೋಹಾನ ಮತ್ತು ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟವನ್ನೇರಿದರು.
ಯೇಸು ಪ್ರಾರ್ಥನೆ ಮಾಡುತ್ತಿದ್ದಾಗ, ಅವರ ಮುಖಭಾವವು ಬದಲಾಯಿತು ಮತ್ತು ಅವರ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂತು.
ಮೋಶೆ ಮತ್ತು ಎಲೀಯನು ಎಂಬ ಇಬ್ಬರು ಪುರುಷರು ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
ಇವರು ಮಹಿಮೆಯಲ್ಲಿ ಕಾಣಿಸಿಕೊಂಡು, ಯೇಸು ಯೆರೂಸಲೇಮಿನಲ್ಲಿ ಪೂರೈಸುವುದಕ್ಕಿದ್ದ ಅವರ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
ಆದರೆ ಪೇತ್ರನು ಅವನ ಸಂಗಡ ಇದ್ದವರೂ ನಿದ್ರೆಯಿಂದ ಭಾರವುಳ್ಳವರಾಗಿದ್ದರು, ಅವರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರ ಕೂಡ ನಿಂತಿದ್ದ ಇಬ್ಬರು ಪುರುಷರನ್ನೂ ಕಂಡರು.
ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು, ನಾವು ನಿಮಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು, ಹೀಗೆ ಮೂರು ಗುಡಾರಗಳನ್ನು ಕಟ್ಟುವೆವು,” ಎಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು.
ಹೀಗೆ ಪೇತ್ರನು ಮಾತನಾಡುತ್ತಿದ್ದಾಗಲೇ, ಮೇಘವು ಬಂದು ಅವರನ್ನು ಕವಿದುಕೊಂಡಿತು ಮತ್ತು ಅವರು ಆ ಮೇಘದೊಳಗೆ ಪ್ರವೇಶಿಸುತ್ತಿದ್ದಾಗ ಶಿಷ್ಯರು ಭಯಪಟ್ಟರು.
ಆಗ ಮೇಘದೊಳಗಿಂದ, “ಈತನು, ನಾನು ಆರಿಸಿಕೊಂಡ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂದು ಹೇಳುವ ಧ್ವನಿಯಾಯಿತು.
ಧ್ವನಿಯಾದ ನಂತರ, ಅವರು ಯೇಸುವನ್ನು ಮಾತ್ರ ಕಂಡರು. ಅವರು ಕಂಡವುಗಳನ್ನು ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
ಮರುದಿನ, ಅವರು ಬೆಟ್ಟದಿಂದ ಕೆಳಗಿಳಿದು ಬಂದಾಗ, ಬಹಳ ಜನರು ಯೇಸುವನ್ನು ಸಂಧಿಸಿದರು.
ಆಗ ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ, “ಬೋಧಕರೇ, ನನ್ನ ಮಗನ ಮೇಲೆ ದೃಷ್ಟಿಯಿಡಿರಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಏಕೆಂದರೆ ಅವನು ನನಗೆ ಒಬ್ಬನೇ ಮಗನು.
ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಬಾಯಲ್ಲಿ ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವುದಲ್ಲದೆ ಜಜ್ಜುತ್ತದೆ. ಅದು ಅವನನ್ನು ಬಿಟ್ಟು ಹೋಗುವುದು ಕಷ್ಟ.
ಅದನ್ನು ಓಡಿಸುವಂತೆ, ನಾನು ನಿಮ್ಮ ಶಿಷ್ಯರನ್ನು ಬೇಡಿಕೊಂಡೆನು, ಆದರೆ ಅದು ಅವರಿಂದ ಆಗಲಿಲ್ಲ,” ಎಂದನು.
ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಿಮ್ಮನ್ನು ಸಹಿಸಲಿ?” ಎಂದು ಹೇಳಿ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ,” ಎಂದರು.
ಅವನು ಇನ್ನೂ ಬರುತ್ತಿದ್ದಾಗಲೇ, ದೆವ್ವವು ಅವನನ್ನು ಒದ್ದಾಡಿಸಿ ನೆಲಕ್ಕೆ ಅಪ್ಪಳಿಸಿತು. ಯೇಸು ಆ ದೆವ್ವವನ್ನು ಗದರಿಸಿ ಹುಡುಗನನ್ನು ಸ್ವಸ್ಥಮಾಡಿ, ಅವನನ್ನು ಅವನ ತಂದೆಗೆ ಪುನಃ ಒಪ್ಪಿಸಿದರು.
ಆಗ ಜನರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರು.
“ಈ ಮಾತುಗಳನ್ನು ಆಳವಾಗಿ ಗ್ರಹಿಸಿಕೊಳ್ಳಿರಿ: ಏಕೆಂದರೆ ಮನುಷ್ಯಪುತ್ರನಾದ ನಾನು ಮನುಷ್ಯರ ಕೈವಶವಾಗುವೆನು,” ಎಂದು ಹೇಳಿದರು.
ಆದರೆ ಶಿಷ್ಯರು ಈ ಮಾತನ್ನು ತಿಳಿದುಕೊಳ್ಳಲಿಲ್ಲ. ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು, ಆ ಮಾತನ್ನು ಕುರಿತು ಯೇಸುವನ್ನು ಕೇಳುವುದಕ್ಕೆ ಅವರು ಭಯಪಟ್ಟರು.
ತಮ್ಮಲ್ಲಿ ಯಾವನು ಎಲ್ಲರಿಗಿಂತ ದೊಡ್ಡವನು ಎಂಬ ತರ್ಕವು ಶಿಷ್ಯರೊಳಗೆ ಎದ್ದಿತು.
ಯೇಸು, ಅವರ ಮನದ ಆಲೋಚನೆಯನ್ನು ತಿಳಿದವರಾಗಿ, ಒಂದು ಮಗುವನ್ನು ತಮ್ಮ ಬಳಿಯಲ್ಲಿ ನಿಲ್ಲಿಸಿ,
“ಯಾರು ಈ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳುತ್ತಾರೋ ಅವರು ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ; ಯಾರು ನನ್ನನ್ನು ಸ್ವೀಕರಿಸಿಕೊಳ್ಳುತ್ತಾರೋ ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುತ್ತಾರೆ. ನಿಮ್ಮೆಲ್ಲರಲ್ಲಿ ಚಿಕ್ಕವನಾಗಿರುವವನೇ ದೊಡ್ಡವನಾಗಿರುವನು,” ಎಂದರು.
ಯೋಹಾನನು, “ಬೋಧಕರೇ, ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವುದನ್ನು ನಾವು ಕಂಡು ಅವನಿಗೆ ಅಡ್ಡಿಮಾಡಿದೆವು, ಏಕೆಂದರೆ ಅವನು ನಮ್ಮೊಂದಿಗೆ ಸೇರಿದವನಲ್ಲ,” ಎಂದನು.
ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ, ನಿಮಗೆ ವಿರೋಧವಾಗಿರದವನು ನಿಮ್ಮ ಪಕ್ಷದವನೇ,” ಎಂದು ಹೇಳಿದರು.
ಯೇಸು ತಾವು ಸ್ವರ್ಗಕ್ಕೆ ಏರಿಹೋಗುವ ಕಾಲ ಬಂದಾಗ, ಯೆರೂಸಲೇಮಿಗೆ ಹೋಗುವುದಕ್ಕಾಗಿ ತಮ್ಮ ಮನಸ್ಸನ್ನು ದೃಢಮಾಡಿಕೊಂಡು
ತಮಗೆ ಮುಂದಾಗಿ ಶಿಷ್ಯರನ್ನು ದೂತರನ್ನಾಗಿ ಕಳುಹಿಸಿದರು. ಅವರು ಹೋಗಿ ಅವರಿಗಾಗಿ ಎಲ್ಲವನ್ನೂ ಸಿದ್ಧಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು.
ಆದರೆ ಸಮಾರ್ಯದವರು ಯೇಸುವನ್ನು ಸ್ವೀಕರಿಸಲಿಲ್ಲ, ಏಕೆಂದರೆ ಯೇಸು ಯೆರೂಸಲೇಮಿಗೆ ಹೋಗುವವರಾಗಿದ್ದರು.
ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನರು ಇದನ್ನು ಕಂಡು, “ಕರ್ತದೇವರೇ, ಎಲೀಯನು ಮಾಡಿದ ಪ್ರಕಾರ ಇವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿಮಗೆ ಒಪ್ಪಿಗೆ ಇದೆಯೋ?” ಎಂದು ಕೇಳಿದರು.
ಆದರೆ ಯೇಸು ಅವರ ಕಡೆ ತಿರುಗಿ ಅವರನ್ನು ಗದರಿಸಿ, “ನೀವು ಎಂಥ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು.
ಮನುಷ್ಯಪುತ್ರನಾದ ನಾನು ಮನುಷ್ಯರ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವುದಕ್ಕಾಗಿ ಬಂದೆನು,” ಎಂದು ಹೇಳಿದರು. ಅನಂತರ ಅವರು ಮತ್ತೊಂದು ಹಳ್ಳಿಗೆ ಹೋದರು.
ಅವರು ದಾರಿಯಲ್ಲಿ ಹೋಗುತ್ತಿರುವಾಗ, ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು” ಎಂದನು.
ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಪುತ್ರನಾದ ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು.
ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು,” ಎಂದರು.
ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ, ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು,” ಎಂದರು.
ಇದಲ್ಲದೆ ಮತ್ತೊಬ್ಬನು ಸಹ, “ಕರ್ತದೇವರೇ, ನಾನು ನಿಮ್ಮನ್ನು ಹಿಂಬಾಲಿಸುವೆನು, ಆದರೆ ನಾನು ಮೊದಲು ಹೋಗಿ ನನ್ನ ಮನೆಯಲ್ಲಿದ್ದವರನ್ನು ಬೀಳ್ಕೊಡುವಂತೆ ನನಗೆ ಅಪ್ಪಣೆಕೊಡಿ,” ಎಂದನು.
ಆಗ ಯೇಸು ಅವನಿಗೆ, “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ,” ಎಂದರು.