ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ, ದೇಶದಲ್ಲಿ ಮತ್ತೊಂದು ಬರವು ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.
KO
Copywork
Kannada OKCV 창세기 26장
성경필사는 빠르게 끝내는 입력 훈련이 아니라, 한 절씩 말씀의 문장과 흐름을 다시 붙드는 시간입니다. 입력 내용은 이 브라우저에 임시 저장되며, 로그인하면 계정에도 저장됩니다.
소제목 단위로 진행 · 창세기
ಆಗ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ಈಜಿಪ್ಟಿಗೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು.
ಈ ದೇಶದಲ್ಲಿ ಪ್ರವಾಸಿಯಾಗಿರು. ಆಗ ನಾನು ನಿನ್ನ ಸಂಗಡ ಇದ್ದು, ನಿನ್ನನ್ನು ಆಶೀರ್ವದಿಸುವೆನು. ನಿನಗೂ, ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.
ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವಾಗುವುದು.
ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ನನ್ನ ವಿಧಿಯನ್ನೂ, ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ನನ್ನ ನೇಮಗಳನ್ನೂ, ಕೈಗೊಂಡು ನಡೆದನು,” ಎಂದರು.
ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.
ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು, ರೆಬೆಕ್ಕಳು ನೋಟಕ್ಕೆ ಚೆಲುವೆಯಾಗಿದ್ದುದರಿಂದ ಆಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು, ಆಕೆ ತನ್ನ ಹೆಂಡತಿಯೆಂದು ಹೇಳುವುದಕ್ಕೆ ಅಂಜಿ ಅವನು, “ಆಕೆಯು ನನ್ನ ತಂಗಿ” ಎಂದನು.
ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ, ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡುತ್ತಿದ್ದಾಗ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸಮಾಡುವುದನ್ನು ಕಂಡನು.
ಆಗ ಅಬೀಮೆಲೆಕನು ಇಸಾಕನನ್ನು ಕರೆದು, “ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು, ‘ಆಕೆಯು ನನ್ನ ತಂಗಿ,’ ಎಂದು ಏಕೆ ಹೇಳಿದೆ?” ಎಂದನು.
ಆಗ ಅಬೀಮೆಲೆಕನು, “ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯನ್ನು ತೆಗೆದುಕೊಂಡಿದ್ದರೆ, ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ,” ಎಂದನು.
ಅಬೀಮೆಲೆಕನು ತನ್ನ ಜನರಿಗೆಲ್ಲಾ, “ಈ ಮನುಷ್ಯನನ್ನಾಗಲಿ, ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು,” ಎಂದು ಅಪ್ಪಣೆಕೊಟ್ಟನು.
ಇಸಾಕನು ಆ ದೇಶದಲ್ಲಿ ಬಿತ್ತಿದ ವರ್ಷದಲ್ಲಿಯೇ ನೂರರಷ್ಟು ಬೆಳೆಯನ್ನು ಹೊಂದಿದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.
ಅವನು ಬಹಳ ಶ್ರೀಮಂತನಾಗಿ, ಕ್ರಮೇಣವಾಗಿ ಹೆಚ್ಚಿದ್ದರಿಂದ ಅಭಿವೃದ್ಧಿಯಾದನು.
ಏಕೆಂದರೆ ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡುಗಳೂ ಬಹಳ ಮಂದಿ ಸೇವಕರೂ ಇದ್ದರು. ಆದ್ದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು.
ಅವನ ತಂದೆ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗೆದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದರು.
ಅಬೀಮೆಲೆಕನು ಇಸಾಕನಿಗೆ, “ನಮ್ಮನ್ನು ಬಿಟ್ಟು ಹೋಗು, ಏಕೆಂದರೆ ನೀನು ನಮಗಿಂತ ಬಲಿಷ್ಠನಾಗಿಬಿಟ್ಟೆ,” ಎಂದನು.
ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ, ಅಲ್ಲಿ ವಾಸಮಾಡಿದನು.
ಇದಲ್ಲದೆ ಇಸಾಕನು ತನ್ನ ತಂದೆ ಅಬ್ರಹಾಮನ ದಿನಗಳಲ್ಲಿ ಅಗೆದಂಥ ಬಾವಿಗಳನ್ನು ತಿರುಗಿ ಅಗೆದನು. ಏಕೆಂದರೆ ಅಬ್ರಹಾಮನು ಮರಣದ ನಂತರ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರುಕೊಟ್ಟನು.
ಇಸಾಕನ ಸೇವಕರು ತಗ್ಗಿನಲ್ಲಿ ಅಗೆದಾಗ, ಅಲ್ಲಿ ಅವರಿಗೆ ಉಕ್ಕುವ ಒರತೆಯ ಬಾವಿಯು ಸಿಕ್ಕಿತು.
ಗೆರಾರಿನ ಮಂದೆಯನ್ನು ಮೇಯಿಸುವವರು, “ಈ ನೀರು ನಮ್ಮದು,” ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ, ಏಸೆಕ್ , ಎಂದು ಹೆಸರಿಟ್ಟನು.
ತರುವಾಯ ಅವರು ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿಯೂ ಅವರು ಜಗಳವಾಡಿದಾಗ, ಅವನು ಅದಕ್ಕೆ, ಸಿಟ್ನಾ , ಎಂದು ಹೆಸರಿಟ್ಟನು.
ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು, “ಈಗ ಯೆಹೋವ ದೇವರು ನಮಗೆ ಸ್ಥಳವನ್ನು ಮಾಡಿದ್ದಾರೆ. ನಾವು ಈ ದೇಶದಲ್ಲಿ ಅಭಿವೃದ್ಧಿ ಹೊಂದುವೆವು,” ಎಂದು ಹೇಳಿ ಅದಕ್ಕೆ, ರೆಹೋಬೋತ್ , ಎಂದು ಹೆಸರಿಟ್ಟನು.
ಅಲ್ಲಿಂದ ಅವನು ಬೇರ್ಷೆಬಕ್ಕೆ ಹೋದನು.
ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರು ನಾನೇ, ಭಯಪಡಬೇಡ. ಏಕೆಂದರೆ ನಾನು ನಿನ್ನ ಸಂಗಡ ಇದ್ದೇನೆ, ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು,” ಎಂದರು.
ಆಗ ಇಸಾಕನು ಅಲ್ಲಿ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಹೇಳಿಕೊಂಡು, ತನ್ನ ಗುಡಾರವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗೆದರು.
ತರುವಾಯ ಅಬೀಮೆಲೆಕನೂ, ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು.
ಇಸಾಕನು ಅವರಿಗೆ, “ನನ್ನ ಬಳಿಗೆ ನೀವು ಏಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ, ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿಬಿಟ್ಟಿರಲ್ಲಾ?” ಎಂದನು.
ಅದಕ್ಕೆ ಅವರು, “ನಿಶ್ಚಯವಾಗಿ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ ಎಂದು ತಿಳಿದು, ನಮಗೂ, ನಿನಗೂ ಮಧ್ಯದಲ್ಲಿ ಒಂದು ಪ್ರಮಾಣವಿರುವ ಹಾಗೆ, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳೋಣವೆಂದು ನಾವು ತೀರ್ಮಾನಿಸಿದ್ದೇವೆ.
ಅದೇನೆಂದರೆ, ನಾವು ನಿನ್ನನ್ನು ಮುಟ್ಟದೆ, ನಿನಗೆ ಒಳ್ಳೆಯದನ್ನೇ ಮಾಡಿ, ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು. ಏಕೆಂದರೆ ನೀನು ಈಗ ಯೆಹೋವ ದೇವರಿಂದ ಆಶೀರ್ವಾದ ಹೊಂದಿರುವೆ,” ಎಂದರು.
ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ತಿಂದು ಕುಡಿದರು.
ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡರು. ಅನಂತರ ಇಸಾಕನು ಅವರನ್ನು ಸಾಗಕಳುಹಿಸಿದನು. ಅವರು ಸಮಾಧಾನದಿಂದ ಹೊರಟು ಹೋದರು.
ಅದೇ ದಿನದಲ್ಲಿ ಇಸಾಕನ ಸೇವಕರು ಬಂದು ತಾವು ಅಗೆದ ಬಾವಿಯಲ್ಲಿ, “ನೀರು ಸಿಕ್ಕಿತ್ತು,” ಎಂದು ಅವನಿಗೆ ಹೇಳಿದರು.
ಅದಕ್ಕೆ ಅವನು, ಷಿಬಾ , ಎಂದು ಹೆಸರಿಟ್ಟನು. ಆದ್ದರಿಂದ ಇಂದಿನವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
ಏಸಾವನು ನಲವತ್ತು ವರ್ಷದವನಾಗಿದ್ದಾಗ, ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತಳನ್ನೂ, ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆಯಾದನು.
ಇವರ ದೆಸೆಯಿಂದ ಇಸಾಕನಿಗೂ, ರೆಬೆಕ್ಕಳಿಗೂ ಮನೋವ್ಯಥೆಯಾಯಿತು.